ನೆಸ್ಟೋರಿಯಸನ ಮತ -
	ಅವತಾರ ಪುರಷನಾದ ಯೇಸುಕ್ರಿಸ್ತನ ವ್ಯಕ್ತಿತ್ವದ ವಿಷಯದಲ್ಲಿ ಕ್ರಿ.ಶ. ಐದನೆಯ ಶತಮಾನದ ಆರಂಭದಲ್ಲಿ ಕ್ರೈಸ್ತ ಸಭೆಯಲ್ಲಿ ಚರ್ಚೆ ಹುಟ್ಟಿ ಭಿನ್ನಾಭಿಪ್ರಾಯಗಳು ಹೊರಬಿದ್ದುವು. ಕ್ರಿಸ್ತ ದೇವರ ಮಗನಾಗಿದ್ದು ಮನುಷ್ಯನಾಗಿ ಈ ಲೋಕದಲ್ಲಿ ಜೀವಿಸಿದ ಕಾಲದಲ್ಲಿ ಆತನಲ್ಲಿ ದೈವೀ ಸ್ವಭಾವವೂ ಮಾನುಷ ಸ್ವಭಾವವೂ ಯಾವ ರೀತಿಯಲ್ಲಿ ಸೇರಿದ್ದುವೆಂಬುದನ್ನು ಸ್ಪಷ್ಟಪಡಿಸುವುದಕ್ಕೆ ಕ್ರೈಸ್ತಸಭೆಯ ಜ್ಞಾನಿಗಳೂ ಬಿಷಪರೂ ಪ್ರಯತ್ನಿಸಿದರು. ಎರಡು ಸ್ವಭಾವಗಳು ಜೊತೆಯಲ್ಲಿದ್ದುವೆಂದು ಕೆಲವರು, ಒಂದರೊಳಗೊಂದು ಇದ್ದುವೆಂದು ಕೆಲವರು, ಐಕ್ಯವಾಗಿದ್ದುವೆಂದು ಕೆಲವರು ಸಾಧಿಸಿದರು. ಈ ಚರ್ಚೆಯಲ್ಲಿ ಯೇಸುವಿನ ತಾಯಿಯಾದ ಮರಿಯಳನ್ನು ದೇವರ ತಾಯಿ ಎಂದು ಕರೆಯಬಹುದೇ ಎಂಬ ವಿಚಾರವೂ ಹುಟ್ಟಿತು. ಅಲೆಕ್ಸಾಂಡ್ರಿಯದ ಬಿಷಪನಾದ ಸಿರಿಲ್ ಎಂಬಾತ ಕ್ರಿಸ್ತನಲ್ಲಿ ದೇವೀ ಸ್ವಭಾವವೂ ಮಾನುಷ ಸ್ವಭಾವವೂ ಐಕ್ಯವಾಗಿದ್ದು ಒಂದು ಸ್ವಭಾವದ ಅನುಭವವು ಮತ್ತೊಂದು ಸ್ವಭಾವಕ್ಕೂ ಸೇರಿರುತ್ತಿತ್ತೆಂದು ಹೇಳಿದ ದೇವರೇ ಮನುಷ್ಯನಾಗಿ ಕ್ರಿಸ್ತನ ಸ್ವರೂಪದಲ್ಲಿ ಹುಟ್ಟಿದ್ದನಾದ್ದರಿಂದ ಆತನ ತಾಯಿ ದೇವರ ತಾಯಿಯೇ ಎಂದು ಆತ ವಾದಿಸಿದ.

	ಕಾನ್‍ಸ್ಟಾಂಟಿನೋಪಲ್‍ನ ಬಿಷಪನಾದ ನೆಸ್ಟೋರಿಯಸ್ ಸಿರಿಲ್‍ನ ಬೋಧನೆಯನ್ನು ಒಪ್ಪದೆ, ಕ್ರಿಸ್ತನಲ್ಲಿ ಎರಡು ಸ್ವಭಾವಗಳು ಪ್ರತ್ಯೇಕವಾಗಿವೆ. ಅದರೂ ಅವುಗಳಿಗೆ ಸಂಬಂಧವಿದೆ; ಆತ ಎರಡು ಸ್ವಭಾವಗಳುಳ್ಳ ಒಬ್ಬ ವ್ಯಕ್ತಿ ಎಂದು ಬೋಧಿಸಿದ. ಮತ್ತು ಮರಿಯಳು ದೇವರ ತಾಯಿ ಎನ್ನುವುದಕ್ಕಿಂತಲೂ ಕ್ರಿಸ್ತನ ತಾಯಿ ಎಂದು ಹೇಳುವುದು ಸರಿ ಎಂದ. ಎರಡು ಸ್ವಭಾವಗಳುಳ್ಳಾತ ಒಬ್ಬ ವ್ಯಕ್ತಿಯಾಗಿರಲಾರನೆಂಬ ಕಾರಣದಿಂದ ನೆಸ್ಟೋರಿಯಸನ ಮತವು ಪಾಷಂಡಮತವೆಂದು ಎಣಿಸಲ್ಪಟ್ಟಿತು.

	ನೆಸ್ಟೋರಿಯಸನ ಈ ಮತ ಖಂಡಿಸಲ್ಪಟ್ಟರೂ ಅರ್ಮೀನಿಯ ಅಬಿಸೀನಿಯ ಪರ್ಷಿಯ ಮೊದಲಾದ ದೇಶಗಳಲ್ಲಿ ಹರಡಿತು. ಆ ರಾಜ್ಯಗಳಲ್ಲಿ ಕ್ರೈಸ್ತಧರ್ಮವನ್ನು ಸ್ಥಾಪಿಸಿದವರು ನೆಸ್ಟೋರಿಯಸನ ಮತಾವಲಂಬಿಗಳು. ಅವರಿಗೆ ಕ್ರೈಸ್ತಧರ್ಮ ಪ್ರಸಾರದಲ್ಲಿ ದೊಡ್ಡ ಆಸಕ್ತಿ ಇತ್ತು. ಐದನೆಯ ಶತಮಾನದ ಅಂತ್ಯದವರೆಗೂ ಈ ಚರ್ಚೆ ಅನೇಕ ಕಡೆಗಳಲ್ಲಿ ಅನೇಕ ವಿಧಗಳಲ್ಲಿ ನಡೆದು ಭಿನ್ನಾಭಿಪ್ರಾಯಗಳು ಹರಡಿದವು. ಕಡೆಗೆ ಮುಖ್ಯವಾಗಿ ರೋಮನ್ ಸಭೆಯ ಬಲದಿಂದ ಅದರ ಅಧಿಕಾರವಿದ್ದ ರಾಜ್ಯಗಳಲ್ಲಿ ಖಾಲ್ಸಿಡನ್ ಸಭೆಯ ನಿರ್ಣಯ ಸಾಮಾನ್ಯವಾಗಿ ಅಂಗೀಕರಿಸಲ್ಪಟ್ಟಿತು. ಅದೇನೆಂದರೆ, ಕ್ರಿಸ್ತನೆಂಬ ಒಬ್ಬ ಅವತಾರ ಪುರುಷನಲ್ಲಿ ದೈವೀಸ್ವಭಾವವೂ ಮಾನುಷ ಸ್ವಭಾವವೂ ಒಂದನ್ನೊಂದು ವಿಂಗಡಿಸದೆ ವಿರೋಧಿಸದೆ ಸಮವಾಗಿದೆ. ಆತನಲ್ಲಿ ದೈವತತ್ತ್ವವೂ ಮನುಷ್ಯತತ್ತ್ವವೂ ಇವೆ. ಆತ ಪರಿಪೂರ್ಣ ದೇವರೂ ಪರಿಪೂರ್ಣ ಮನುಷ್ಯನೂ ಆಗಿದ್ದಾನೆ. ಆತನು ಇಬ್ಬರಲಿ,್ಲ ಒಬ್ಬನೆ.         (ಎಚ್.ಎಸ್.; ಎ.ಪಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ